ಮಹಾಛಂದಸ್ಸು -	
	 ಈ ಹೆಸರನ್ನು ಮೊದಲು ಬಳಿಸಿದವರು ಕುವೆಂಪು, ಅವರು ತಮ್ಮ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಮಹಾಛಂದಸ್ಸಿನ ಎಂಬ ವಿಶೇಷಣವನ್ನು ಶೀರ್ಷಿಕೆಯಲ್ಲೇ ಹೆಚ್ಚಿಸಿದ್ದಾರೆ. ಅವರ ಚಿತ್ರಾಂಗದಾ ಖಂಡಕಾವ್ಯದ ಛಂದಸ್ಸು ಪ್ರಥಮಾವೃತ್ತಿಯಲ್ಲಿ ಸರಳರಗಳೆಯಾಗಿದ್ದು. ಅನಂತರ ಅದನ್ನು ಪರಿಷ್ಕರಿಸಿ ಮಹಾಛಂದಸ್ಸಿಗೆ ತಿರುಗಿಸಲಾಗಿದೆ. 

	ಮಹಾಛಂದಸ್ಸಿನ ತಳಹದಿ ಸರಳರಗಳೆ ಸರಳ ರಗಳೆಯ ಮೂಲ ಲಲಿತರಗಳೆ, ಹೊಸಗನ್ನಡ ಕವಿಗಳು ಲಲಿತ ರಗಳೆಯ ಆದ್ಯಂತಪ್ರಾಸಗಳನ್ನು ನಿವಾರಿಸಿ ಪಾದಾಂತ ಯತಿನಿಯಮವನ್ನು ಉಲ್ಲಂಘಿಸಿ, ಪಾದಗಳನ್ನು ನಿಲುಗಡೆಯಿಲ್ಲದಂತೆ ಹರಿಯುಂಟು. ಸರಳರಗಳೆಯನ್ನು ನಿರ್ಮಿಸಿಕೊಂಡರು. ಅದರ ಪರಿಣತರೂಪವೇ ಮಹಾಛಂದಸ್ಸು. ಇದನ್ನು ಸರಳಗರಳೆಯೆಂದೇ ಕರೆಯಬಾರದೇಕೇ, ಬೇರೊಂದು ಹೆಸರಿನ ಅಗತ್ಯವಿದೆಯೆ ಎಂಬ ಪ್ರಶ್ನೆ ಉದ್ಭವಿಸಿರುವುದುಂಟು. ಆದರೆ ತಮ್ಮದು ಸರಳ ರಗಳೆ ಅಲ್ಲವೇ ಅಲ್ಲ, ಅದು ಬಹಳ ಭಿನ್ನವಾದ ಛಂದಸ್ಸು ಎಂಬುದು ಕುವೆಂಪು ಅವರ ದೃಢನಿಲುವು. ಆದ್ದರಿಂದ ಚಿತ್ರಾಂಗದಾ; ಶ್ರೀರಾಮಾಯಣದರ್ಶನಂಗಳ ಛಂದಸ್ಸನ್ನು ಮಹಾಛಂದಸ್ಸು ಎಂದು ಕರೆಯುವುದೇ ಹೆಚ್ಚು ಯುಕ್ತವೆನಿಸುತ್ತದೆ. (ಸಂಕೀರ್ಣರಗಳೆ ಎಂಬ ನಾಮಾಂತರವನ್ನು ಒಬ್ಬರು ಚಿತ್ರಿಸಿದ್ದಾರೆ). 

	ಮಹಾಛಂದಸ್ಸಿನ ಕೆಲವು ಲಕ್ಷಣಗಳು. ಸರಳರಗಳೆಯಲ್ಲೇ ಇವೆ ಎಂದೊಪ್ಪಬೇಕು. ಅವೆಂದರೆ, ಗಣ ಪರಿವೃತ್ತಿ, ಯತಿಸ್ವಚ್ಛಂದತೆ, ಪರಿಚ್ಛೇದ ವಿಭಜನೆ ಇತ್ಯಾದಿ. ಆದರೆ ಸರಳರಗಳೆಯಲ್ಲಿ ಅಪವಾದಾತ್ಮಕವಾಗಿ ಕಂಡುಬರುವ ಈ ಲಕ್ಷಣಗಳು ಮಹಾಛಂದಸ್ಸಿನಲ್ಲಿ ಬಲುಮಟ್ಟಿಗೆ ನಿಯಮವಾಗಿ ಪರಿಣಮಿಸಿವೆ ಎನ್ನಬಹುದು. ಎಲ್ಲಕ್ಕಿಂತ ಮುಖ್ಯವಾದುದು ಗಣಪರಿವೃತ್ತಿ. ಎಂ.ಚಿದಾನಂದಮೂರ್ತಿಯವರು ಹೇಳುವಂತೆ, ಮಹಾಛಂದಸ್ಸು ಗಣಪರಿವೃತ್ತಿಯ ಪರಾ ಕಾಷ್ಠ. ಈ ಕಾರಣದಿಂದಲೇ ಅದು ವಿಶಿಷ್ಟವೆನಿಸುವುದು. 

	ಸರಳರಗಳೆಯ ಪ್ರತಿಪಾದದಲ್ಲಿ ಸಾಮಾನ್ಯವಾಗಿ ಐದು ಮಾತ್ರೆಯ ನಾಲ್ಕು ಗುಣಗಳು ಬರುತ್ತವೆ; ಎಂದರೆ ಪ್ರತಿಪಾದಕ್ಕೆ ಇಪ್ಪತ್ತು ಮಾತ್ರೆಗಳು. ಆದರೆ ಮಹಾಛಂದಸ್ಸಿನ ಪಾದಗಳಲ್ಲಿ ಮಾತಾ ಸಂಖ್ಯೆ 19, 21, 22 ಹೀಗೆಲ್ಲ ವೃತ್ಯಾಸವಾಗುವುದುಂಟು.

	ಮಹಾಛಂದಸ್ಸು ಲೆಕ್ಕಾಚಾರದ ಪಂಚಮಾತ್ರಾ ಗಣಗಳಿಂದ ಯಾಂತ್ರಿಕವಾಗಿ ರೂಪುಗೊಂಡಿಲ್ಲ; ಇದರ ತಂತ್ರವೇ ಬೇರೆ, ಓಟವೇ ಬೇರೆ, ಜಾಯಮಾನವೇ ಬೇರೆ ಎನ್ನುತ್ತಾರೆ ಕುವೆಂಪು. ಅವರ ಪ್ರಕಾರ, ಮಹಾಛಂದಸ್ಸಿನ ಪಂಕ್ತಿಯ ಮೂಲ ಘಟಕ ಐದು ಮಾತ್ರೆಯ ಗುಣವಲ್ಲ, ಎರಡು ಮತ್ತು ಮೂರು ಮಾತ್ರೆಯ (ಉಪ) ಗಣಗಳು. ಎಂತಲೇ ಬಹಳ ಕಡೆ ಪಂಚಮಾತ್ರಾಗಣ 2+3 ಅಥವಾ 3+2 ಆಗಿ ಒಡೆಯುತ್ತದೆ. ಉದಾಹರಣೆಗೆ :-

           2       3              
.         ಹೇ | ಕಪಿ | ಧ್ವಜ ಗೌರವ ಪ್ರಾಣಸೂತ್ರರಿರ
             3        2
ನಮ್ಮ | ಪಡೆ | ಪಟ್ಟ ಕೋಟಲೆ ಕಿರಿದು ಮತ್ತೆಮ್ಮೆ
	ದ್ವಿಮಾತ್ರಾಗಣಗಳು ಪ್ರತ್ಯೇಕವಾಗಿ ಪಾದದ ಆದಿ ಅಥವಾ ಮಧ್ಯ ಅಥವಾ ಅಂತ್ಯದಲ್ಲಿ ನಿಲ್ಲಲೂಬಹುದು.  ಉದಾಹರಣೆಗೆ.
	 2          2          2
	ಪುಸಿ | ಪುಸಿ | ಪುಸಿ | ಎನುತ್ತೆ ಕಿವಿಮುಚ್ಚಿದನ್ ಮಹಾ
                                              2
	ಓಡುತ್ತಾ ಮಾಯಾವಿ | ತಾರಿ | ಮಯ್ಗರೆದನೊಯ್ಕನೆಯೆ
                                                                          2
	ತನ್ನಣ್ಣನೊಡಲೆಯೆನೆ ಚರಿಸಿದನ್ ಸುಗ್ರೀವ | ನುಂ 
5+5ರ ಸ್ಥಾನದಲ್ಲಿ 3+3+4+, 3+4+3+, 3+7 ಇತ್ಯಾದಿಯಾಗಿಯೂ ಗಣಪರಿವೃತ್ತಿ ಕಂಡುಬರುವುದು ಸಾಮಾನ್ಯ.  ಕೆಲವು ಉದಾಹರಣೆಗಳು:

  3          3              4
ಏನು | ಮೌನ್ಯ | ವಿದೆನ್ನ ಕೋಮಲೆ? ಕೋಪವೆ ನಿನಗೆ
    3              4               3
ತೆರೆಯ | ತೇಜಿಯ | ಪಾಯ್ವಂ | ದಳದಂತೆ ಕಣ್ ಸೆಳೆದು
  3                 7
ನಮ್ಮ | ಕತೆಯುಮನಂತೆ | ವೇತೆಯನಾಕರ್ಣಿಸುತೆ

ಪಂಚಮಾತ್ರಾಗಣದ  ಏಕತಾನತೆಗೆ ಅವಕಾಶವಾಗದಂತೆ ಕವಿ ಪರಮಾವಧಿ ಸ್ವಾತಂತ್ರ್ಯವಹಿಸಿರುವುದಕ್ಕೆ ಇದೆಲ್ಲ ಸಾಕ್ಷಿ. ಆದರೆ ಮಹಾಛಂದಸ್ಸಿನಲ್ಲಿ ಐದು ಮಾತ್ರೆಯ ಗಣಗಳು ಬರುವುದೇ ಇಲ್ಲವೆಂದು ಅರ್ಥವಲ್ಲ. 

	ಮಹಾಛಂದಸ್ಸಿನಲ್ಲಿ ಪಂಕ್ತಿ ಮೂಲ ಮಾನವಲ್ಲವೆಂದೂ ವಾಕ್ಯ ಮೂಲಮಾನವೆಂದೂ ಹೇಳುತ್ತಾರೆ ಕುವೆಂಪು, ಮಹಾಛಂದಸ್ಸು ಸರ್ವಛಂದೋಸಮನ್ವಯ ಎಂದೂ ಅವರ ಅಭಿಮತ, ವೃತ್ತ, ಷಟ್ಪದಿ ಮುಂತಾದವುಗಳ ಲಯಗಳನ್ನು ಅದರಲ್ಲಿ ಭಾಗಶಃ ಗುರುತಿಸಬಹುದು. ಆದರೆ ವಿಪುಲ ಗಣಪರಿವೃತ್ತಿ ಈ ಲಯವೈವಿಧ್ಯಕ್ಕೆ ಕಾರಣ. 

	ಶ್ರೀರಾಮಾಯಣ ದರ್ಶನದ ಮಹತ್ತಿಗೆ ತಾಂತ್ರಿಕವಾಗಿ ಅದರ ಮಹಾಶೈಲಿಯಂತೆ ಮಹಾಛಂದಸ್ಸೂ ಸಹಾಯಕವಾಗಿದೆ. ಅದನ್ನು ಅನುಕರಿಸಿದವರೂ ಉಂಟು.   	
(ಸಿ.ಪಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ